English shape=
      

ವಾರದ ಸಂದೇಶ - Word For The Week

"ವಾರದ ಸಂದೇಶ" ವು ಪ್ರತೀ ವಾರ ಕಳುಹಿಸಲ್ಪಡುವ ಪತ್ರಿಕೆಯಾಗಿದೆ. ಪ್ರತೀ ಸಂಚಿಕೆಯು ಝ್ಯಾಕ್ ಪೂನನ್ ರವರ ಲೇಖನ, ಪುಸ್ತಕ ಅಥವಾ ಪ್ರಬೋಧನೆಗಳಿಂದ ಆಯ್ದ ಭಾಗವಾಗಿರುತ್ತದೆ.
2011 |  2012 |  2013
ಮನೆಯು ಶಿಷ್ಯತ್ವದ ತವರು
ಮೇ 2012 (2) - ಝ್ಯಾಕ್ ಪೂನನ್

ಪ್ರಭು ಯೇಸುವಿನಿಂದ ಕಲಿಯುವವನು ಮತ್ತು ಅವರನ್ನು ಹಿಂಬಾಲಿಸುವವನು, ಅವನೇ ಒಬ್ಬ ಶಿಷ್ಯನು. ಆತನು ಯೇಸುವನ್ನು ತನ್ನ ಮಾದರಿಯನ್ನಾಗಿ ಇರಿಸಿ, ತನ್ನ ಬಾಳು ಎಲ್ಲಾ ದೃಷ್ಟಿಕೋನದಿಂದಲೂ ಒಡೆಯನ ಬಾಳಿಗೆ ಸರಿಹೊಂದುವಂತೆ ಆಗಬೇಕೆಂದು ಪ್ರಯತ್ನಿಸುವನು.

ಹೇಗೆ ಮನೆಯಲ್ಲಿ ಔದಾರ್ಯವು(ಪ್ರೀತಿಯು) ಆರಂಭವಾಗುವದೋ ಹಾಗೆಯೇ, ಶಿಷ್ಯತ್ವದ ಆರಂಭವೂ ಕೂಡ ಮೊದಲನೆಯದಾಗಿ ಮನೆಯಲ್ಲಿಯೇ ಆಗುವದು.

ಯೇಸುವು ನಜರೇತಿನಲ್ಲಿ ವಾಸಿಸಿದ 30 ವರ್ಷಗಳ ಬಗ್ಗೆ ಕೇವಲ ಎರಡು ವಿಷಯಗಳನ್ನು ಸತ್ಯವೇದದಲ್ಲಿ ಪ್ರಸ್ತಾವಿಸಲಾಗಿದೆ. ಮೊದಲನೆಯದಾಗಿ, ಇಬ್ರಿಯರಿಗೆ 4:15 ರಲ್ಲಿ, ಅವರು ನಮ್ಮ ಹಾಗೆಯೇ ಎಲ್ಲಾ ವಿಷಯಗಳಲ್ಲಿ ಶೋಧನೆಗೆ ಗುರಿಯಾಗಿಯೂ, ಪಾಪ ಮಾತ್ರ ಮಾಡಲಿಲ್ಲವೆಂದು ನಮಗೆ ತಿಳಿಸಲಾಗಿದೆ. ಅದರಿಂದ ನಾವು ತಿಳಿಯಬೇಕಾದುದು ಏನೆಂದರೆ, ಅವರು ನಜರೇತಿನಲ್ಲಿ ಕಳೆದ ಆ 30 ವರ್ಷಗಳಲ್ಲಿ ಹಲವಾರು ಶೋಧನೆಗಳು - ಎಲ್ಲರಿಗೂ ತಮ್ಮ ಮೊದಲ 30 ವರ್ಷಗಳಲ್ಲಿ ಎದುರಾಗುವ ಶೋಧನೆಗಳಂತೆಯೇ - ಅವರಿಗೂ ಸಹ ಬಾಲ್ಯದಿಂದ ವಯಸ್ಕರಾಗುವ ವರೆಗೆ ಬಂದಿರಬೇಕು.

ಯೇಸುವಿಗೆ ಕನಿಷ್ಠ ಪಕ್ಷ 4 ಜನ ಸೋದರರೂ, ಇಬ್ಬರು ಸೋದರಿಯರೂ ಅವರ ಮನೆಯಲ್ಲಿ ಇದ್ದರೆಂದು ನಮಗೆ ಮಾರ್ಕ. 6:3 ರಲ್ಲಿ ತಿಳಿಸಿದೆ. ಅಂದರೆ ಅವರ ಮನೆಯಲ್ಲಿ ಕನಿಷ್ಠ 9 ಸದಸ್ಯರಿದ್ದರು - ಮತ್ತು ಅವರದು ಒಂದು ಬಡ ಕುಟುಂಬವಾಗಿತ್ತು. (ಲೂಕ. 2:24 ರೊಂದಿಗೆ ಯಾಜಕಕಾಂಡ 12:8 ನ್ನು ಹೋಲಿಸಿದಾಗ, ಯೆಹೋವನ ಸನ್ನಿಧಿಯಲ್ಲಿ ಸಮರ್ಪಿಸಲು ಒಂದು ಕುರಿಯನ್ನು ಕೊಡುವ ಸಾಮರ್ಥ್ಯವೂ ಮರಿಯಳಲ್ಲಿ ಇರಲಿಲ್ಲವೆಂದು ನಾವು ತಿಳಕೊಳ್ಳಬಹುದು). ಮನೆಯಲ್ಲಿ ತಳಮಳದ ಪರಿಸ್ಥಿತಿ ಉಂಟಾದಾಗ, ತಾನು ಏಕಾಂತವಾಗಿರಲು ತನ್ನದೇ ಆದ ಕೊಠಡಿ ಅಲ್ಲಿ ಯೇಸುವಿಗೆ ಇರಲಿಲ್ಲವೆಂಬುದು ಸ್ಪಷ್ಟವಿದೆ. ಆತನ ತಮ್ಮಂದಿರಿಗೆ ಆತನಲ್ಲಿ ನಂಬಿಕೆ ಇರಲಿಲ್ಲವೆಂದು ಸಹ ಯೋಹಾನನು 7:5 ನಮಗೆ ತಿಳಿಸುತ್ತದೆ. ತಮ್ಮೊಡನೆ ವಾಸಿಸಿದ್ದರೂ, ಸಿಟ್ಟು ಮತ್ತು ಸ್ವಾರ್ಥತೆಗಳಿಗೆ ಯಾವತ್ತೂ ಅವಕಾಶವನ್ನು ನೀಡದಿದ್ದ ಈತನ ಬಗ್ಗೆ ಅವರಲ್ಲಿ ಸ್ವಾಭಾವಿಕವಾಗಿಯೇ ಅಸೂಯೆಯಿತ್ತು.

ಅನೇಕ ಬಾರಿ ಅವರು ಯೇಸುವಿನ ವಿರುದ್ಧವಾಗಿ ಗುಂಪುಗೂಡಿ ಇವರನ್ನು ಚುಡಾಯಿಸಿ ರೇಗಿಸಿರಬೇಕು. ದೊಡ್ಡ ಪರಿವಾರ ಹಾಗೂ ಅವಿಶ್ವಾಸಿ ಬಂಧುಗಳೊಡನೆ ಚಿಕ್ಕ ಮನೆಯೊಂದರಲ್ಲಿ ವಾಸಿಸಿರುವ ಪ್ರತಿಯೊಬ್ಬನಿಗೂ, ನಜರೇತಿನಲ್ಲಿ ಯೇಸುವು ಅನುಭವಿಸಿರಬಹುದಾದ ತೊಡಕುಗಳ ಬಗ್ಗೆ ಮನದಟ್ಟಾಗುವದು. ಆದಾಗ್ಯೂ ಅವರು ಪಾಪವನ್ನು ಮಾಡಲಿಲ್ಲ. ಇದಲ್ಲದೆ, ಯೇಸುವಿನ ಹದಿಹರೆಯದಲ್ಲಿ ಇಲ್ಲವೇ ಅವರು ಇಪ್ಪತ್ತರ ಹರೆಯವನ್ನು ದಾಟಿದಾಗ ಬಹುತೇಕವಾಗಿ ಯೋಸೇಫನು ತೀರಿಕೊಂಡಿರಬೇಕು (ಏಕೆಂದರೆ, ಯೇಸುವಿನ ಬಹಿರಂಗ ಸೇವೆಯ ಅವಧಿಯಲ್ಲಿ ಒಮ್ಮೆಯೂ ಯೋಸೇಫನ ವಿಚಾರ ನಮಗೆ ತೋರಿಬರುವುದಿಲ್ಲ). ಹಾಗಾಗಿ ಆ 8 ಜನರ ಪರಿವಾರದ ಹೊಣೆ, ಹಿರಿಯ ಮಗನಾಗಿದ್ದ ಯೇಸುವಿನ ಮೇಲೆ ಬಿದ್ದಿತು. ಆ ಕುಟುಂಬದ ಪೋಷಣೆಗಾಗಿ ಅವರು ಬೆವರು ಸುರಿಸಬೇಕಿತ್ತು. ಅಂಥಹ ಸನ್ನಿವೇಶಗಳಲ್ಲಿ ಅನೇಕ ಶೋಧನೆಗಳನ್ನು ಯೇಸುವು ಎದುರಿಸಿರಬೇಕು. ಆದರೂ ಅವರು ಪಾಪಗೈಯಲಿಲ್ಲ.

ಎರಡನೆಯದಾಗಿ, ಯೇಸುವು ತನ್ನ ತಂದೆತಾಯಿಗಳ ಮನೆಯಲ್ಲಿ ವಾಸಿಸಿದ್ದಷ್ಟು ದಿನವೂ - 30 ವರ್ಷಗಳ ವರೆಗೆ - "ಯೋಸೇಫ ಮತ್ತು ಮರಿಯರಿಗೆ ಅಧೀನನಾಗಿದ್ದನು" (ಲೂಕ. 2:51). ಅದು ಸರಳವಾದ ಕಾರ್ಯವಾಗಿರಲಿಲ್ಲ - ನಮ್ಮ ಬಾಲ್ಯದ ದಿನಗಳ ಅನುಭವದಿಂದ ಅದು ನಮ್ಮೆಲ್ಲರಿಗೂ ತಿಳಿದಿದೆ. ನಮ್ಮ ಚಿಕ್ಕಂದಿನಲ್ಲಿ ಹಲವಾರು ಬಾರಿ, ನಾವು ಏನನ್ನೋ ಮಾಡಲು ಇಚ್ಛಿಸಿದ್ದಾಗ, ನಮ್ಮ ತಂದೆತಾಯಿಗಳು ಇನ್ನೇನನ್ನೋ ಮಾಡಲು ಹೇಳಿದರೆ, ಸ್ವಾಭಾವಿಕವಾಗಿಯೇ ಅದು ನಮಗೆ ಇಷ್ಟವಾಗುತ್ತಿರಲಿಲ್ಲ! ಆದುದರಿಂದ ಯೇಸುವಿನ ಮಾದರಿಯನ್ನು ನಾವು ನಮ್ಮ ಮಕ್ಕಳಿಗೆ ಎತ್ತಿ ತೋರಿಸಬಹುದು. ತಂದೆಗಳಾದವರು ತಮ್ಮ ಮಕ್ಕಳನ್ನು "ಕರ್ತನಿಗೆ ಮೆಚ್ಚುಗೆಯಾದ ಬಾಲೋಪದೇಶದೊಂದಿಗೆ ಸಾಕಿ ಸಲಹಿರಿ," ಎಂದು ಆಜ್ಞಾಪಿಸಲಾಗಿದೆ (ಎಫೆಸದವರಿಗೆ 6:4). "ಕರ್ತನಿಗೆ ಮೆಚ್ಚುಗೆಯಾದ ಬಾಲೋಪದೇಶ" ಎಂದರೇನು? ಅದು ಪ್ರಾಥಮಿಕವಾಗಿ ಸ್ವತಃ ಕರ್ತರಾದ ಪ್ರಭುವು ನಜರೇತಿನಲ್ಲಿ ಬಾಳಿ ಮಕ್ಕಳಿಗಾಗಿ ನೀಡಿದ ಉದಾಹರಣೆ.

ನಾವು ಮೇಲೆ ನೋಡಿದಂತೆ, ಈ ಎರಡು ಅಂಶಗಳಲ್ಲಿ ಕರ್ತರು ನೀಡಿರುವ ಮಾದರಿಯನ್ನು ಅನುಸರಿಸುವ ಒಬ್ಬೊಬ್ಬ ಹುಡುಗ ಮತ್ತು ಹುಡುಗಿಯೂ ಜ್ಞಾನದಲ್ಲಿ ಬೆಳೆಯುವರು ಮತ್ತು ದೇವರ ಪ್ರಸನ್ನತೆಗೆ ಒಳಗಾಗುವರು - ಸ್ವತಃ ಯೇಸುವಿನ ಬಾಳಿನಲ್ಲಿ ನಡೆದಂತೆಯೇ (ಲೂಕ. 2:52).

ಅನುವಾದಾ : ಜಾನ್     ಈ ಪುಟವನ್ನು ಮುದ್ರಿಸಿಕೊಳ್ಳಿ   ಈ ಪುಟವನ್ನು ಕಳುಹಿಸಿ

"ವಾರದ ಸಂದೇಶ!" - ನಿಮ್ಮ ಯಾವುದೇ ಅನಿಸಿಕೆ ಅಥವಾ ಪ್ರಶೆಗಳಿದ್ದಲ್ಲಿ ದಯವಿಟ್ಟು ನಮಗೆ ಬರೆಯಿರಿ :
kannada@cfcindia.com, cfc@cfcindia.com
ಈ ಪುಟವನ್ನು ಸ್ನೇಹಿತರಿಗೆ ಕಳುಹಿಸಿ | ವಾರದ ಸಂದೇಶ | ದೈವ ಸಂದೇಶಗಳು | ಆಡಿಯೋ| ವಿಡಿಯೋ | ಸಂಪರ್ಕಿಸಿರಿ

© Copyright - Christian Fellowship Church , Bangalore. (INDIA)