|
ಕ್ರಿಸ್ತನ ಸಭೆಯಲ್ಲಿ ಯಾರೊಬ್ಬರೂ ಅತ್ಯಾವಶ್ಯಕರಲ್ಲ. ನಾವಿಲ್ಲದೆಯೂ ದೇವಕಾರ್ಯವು ಸಲೀಸಾಗಿ ಮುಂದೆ ಸಾಗಬಲ್ಲದು. ನಿಜವೆಂದರೆ, ತಾವು ಬಹಳ ಬೇಕಾದವರೆಂದು ಅಂದುಕೊಳ್ಳುವ ಜಂಬದ ಕೋಳಿಗಳ ಸಹಾಯವಿಲ್ಲದೆ ಸಭೆಯು ಇನ್ನೂ ಚೆನ್ನಾಗಿ ಮುನ್ನಡೆಯಬಲ್ಲದು! ನಾವು ಈ ವಿಷಯವನ್ನು ಪದೇಪದೇ ಗಮನಕ್ಕೆ ತಂದುಕೊಳ್ಳಬೇಕು. ತಾನು "ಅತ್ಯಾವಶ್ಯವಾದ" ವ್ಯಕ್ತಿಯೆಂದು ಅಂದುಕೊಳ್ಳುವ ಎಲ್ಲರ ಗರ್ವಭಂಗಮಾಡುವ ಒಂದು ಔಷಧದ ಬಗ್ಗೆ ನಾನು ಒಮ್ಮೆ ಓದಿದ್ದೆ! ಒಂದು ಬಕೇಟಿನಲ್ಲಿ ನೀರನ್ನು ತುಂಬಿ ಅದರೊಳಗೆ ಅವರು ತಮ್ಮ ಕೈಯ ಹಸ್ತವನ್ನು ಮುಳುಗಿಸಿ - ಅನಂತರ ಕೈಯನ್ನು ಮೇಲಕ್ಕೆತ್ತಲು ತಿಳಿಸಲಾಗಿತ್ತು. ಆಗ ನೀರಿನಲ್ಲಿ ಉಂಟಾದ ಖಾಲಿ ಗುಂಡಿಯು ಎಷ್ಟು ಸಮಯ ಇರುವುದೋ ಅಷ್ಟು, ಅವರಿಲ್ಲದಿದ್ದಾಗ ಸಭೆಯಲ್ಲಿ ಅವರ ಜಾಗವು ಖಾಲಿಯಾಗಿ ಇರುವುದು!! ನಮ್ಮಲ್ಲಿರುವ ವರಗಳು ಸಭೆಗೆ ಉಪಯೋಗಕರ ಹೌದು; ಆದರೆ ನಾವ್ಯಾರೂ "ಅತ್ಯಾವಶ್ಯ"ವಲ್ಲ.
ಯಾವುದೇ ಸಮಯ ದೇವರು ನಮ್ಮನ್ನು ಹಿಂದಕ್ಕೆ ಕರೆದಾಗ ನಾವು ಹಿನ್ನೆಲೆಗೆ ತೆರಳಲು ತಯಾರಿರಬೇಕು. ಆದರೆ ಸ್ವಾರ್ಥಿಯಾದ ಕ್ರೈಸ್ತ ಕಾರ್ಯಕರ್ತನು ಅದಕ್ಕೆ ಎಂದಿಗೂ ಸಮ್ಮತಿಸನು. ಆತನ ಇಚ್ಛೆ ಆದಷ್ಟು ಕಾಲ ತನ್ನ ಸ್ಥಾನವನ್ನು ಹಿಡಿದಿರಬೇಕೆಂದು. ಇಂದು ಇಂತಹ ಅನೇಕ "ಕ್ರೈಸ್ತ ನಾಯಕರು" ತಮ್ಮ "ಗದ್ದುಗೆ"ಗಳಲ್ಲಿ ಕೊಳೆಯುತ್ತಿದ್ದು, ದೇವಕಾರ್ಯಕ್ಕೆ ತಡೆಯೊಡ್ಡುತ್ತಿರುವರು. ತಮ್ಮ ಸ್ಥಾನವನ್ನು ಇನ್ನೊಬ್ಬರಿಗೆ ಒಪ್ಪಿಸಿ, ತಾವು ಸೌಜನ್ಯದಿಂದ ಹಿನ್ನೆಲೆಯಲ್ಲಿ ಮರೆಯಾಗುವುದನ್ನು ಅವರು ತಿಳಿದಿಲ್ಲ.
ವಾರಿಸುದಾರರಿಲ್ಲದ ಯಶಸ್ಸು ಸೋಲಿಗೆ ಸಮಾನ ಎಂಬ ಮಾತನ್ನು ಬಹುಶಃ ನೀವು ಕೇಳಿರಬಹುದು. ಇದನ್ನು ಅರಿತಿದ್ದ ಯೇಸುವು ತಮ್ಮ ಕಾರ್ಯವನ್ನು ಮುನ್ನಡೆಸಲು ಜನರನ್ನು ತರಬೇತಿ ಮಾಡಿದರು. ತಮ್ಮ ಕಾರ್ಯದ ನಾಯಕತ್ವವನ್ನು ವಹಿಸಿಕೊಳ್ಳಲು ಅವರು ಮೂರುವರೆ ವರ್ಷಗಳಲ್ಲಿ ಇತರರನ್ನು ಸಿದ್ಧಗೊಳಿಸಿದ್ದರು. ನಾವು ಅನುಕರಿಸಬಹುದಾದ ಎಂತಹ ಉತ್ತಮ ಉದಾಹರಣೆ ಇದಾಗಿದೆ!
ಕೆಲಸವನ್ನು ಮುಂದುವರೆಸಲು ವ್ಯಕ್ತಿಗಳನ್ನು ತರಬೇತುಗೊಳಿಸುವುದರ ಅವಶ್ಯಕತೆಯನ್ನು ಪೌಲನು ತಿಳಿದಿದ್ದನು. ಆತನು 2 ತಿಮೊಥೆಯನಿಗೆ 2:2 ರಲ್ಲಿ ತಿಮೊಥೆಯನಿಗೆ, "ನಾನು ನಿನಗೆ ಒಪ್ಪಿಸಿರುವದನ್ನು ಇತರರಿಗೆ (4ನೇ ಪೀಳಿಗೆಗೆ) ಕಲಿಸಿಕೊಡಲು ಶಕ್ತರಾದ ನಂಬಿಗಸ್ತ ಜನರಿಗೆ ನೀನು ಹಸ್ತಾಂತರಿಸಬೇಕೆಂದು ನನ್ನ ಬಯಕೆಯಾಗಿದೆ," ಎಂದು ತಿಳಿಸಿದನು (ಭಾವಾನುವಾದ). ಬೇರೆ ಮಾತುಗಳಲ್ಲಿ, "ಈ ಅಮೂಲ್ಯ ಸಂಪತ್ತನ್ನು ನೀನು ಖಚಿತವಾಗಿ ಇತರರಿಗೆ ಹಸ್ತಾಂತರಿಸಬೇಕು. ನಿನಗಿಂತ ಕಿರಿಯರು ಮೇಲೆ ಬರುವುದಕ್ಕೆ ಎಂದಿಗೂ ತಡೆಯೊಡ್ಡದಿರು," ಎಂದು ಪೌಲನ ಇಂಗಿತವಾಗಿತ್ತು. ಉದ್ಯಮಿಗಳು ಸಹ "ಉತ್ತರಾಧಿಕಾರಿ ಇಲ್ಲದ ಯಶಸ್ಸು ಅಪಜಯವೇ," ಎನ್ನುವ ಮೂಲತತ್ವವನ್ನು ಸ್ವೀಕರಿಸುತ್ತಾರೆ. ಆದರೆ ಅನೇಕ ಕ್ರೈಸ್ತ ಮುಖಂಡರು ಇದನ್ನು ಅಂಗೀಕರಿಸಿಲ್ಲ. ನಿಜಕ್ಕೂ, "ಈ ಲೋಕದವರು ತಮ್ಮ ವಿಷಯದಲ್ಲಿ ಬೆಳಕಿನ ರಾಜ್ಯದವರಿಗಿಂತಲೂ ಜಾಣರಾಗಿದ್ದಾರೆ."
ತನಗಿಂತ ಕಿರಿಯನಾದರೂ ಕಾರ್ಯಗಳನ್ನು ತನಗಿಂತ ಚೆನ್ನಾಗಿ ಮಾಡಬಲ್ಲ ಇನ್ನೊಬ್ಬನ ಬಗ್ಗೆ ಅಸೂಯೆಪಡುವುದು ಬರೀ ಸ್ವಾರ್ಥದೃಷ್ಟಿ, ಅಷ್ಟೇ. ಕಾಯಿನನು, ದೇವರು ತನ್ನನ್ನು ಅಂಗಿಕರಿಸದೆ ಹೇಬೆಲನನ್ನು ಮೆಚ್ಚಿದ್ದನ್ನು ಕಂಡು ಅಸೂಯೆಪಟ್ಟನು. ಒಂದು ವೇಳೆ ಹೇಬೆಲನು ತನಗಿಂತ ದೊಡ್ಡವನಾಗಿದ್ದರೆ, ಕಾಯಿನನು ಅದನ್ನು ಸಹಿಸಿಕೊಳ್ಳುತ್ತಿದ್ದನೇನೋ. ತನ್ನ ತಮ್ಮನು ತನ್ನನ್ನೇ ಮೀರಿಸಿದ ವಿಪರೀತ ಸ್ಥಿತಿಯು ಕಾಯಿನನನ್ನು ಎಷ್ಟು ಕೋಪಗೊಳಿಸಿತೆಂದರೆ ಹೇಬೆಲನನ್ನು ಆತನು ಕೊಲೆಗೈದನು.
ಯೋಸೇಫ ಮತ್ತು ಅವನ ಅಣ್ಣಂದಿರ ಪ್ರಕರಣದಲ್ಲೂ ನಾವು ಇದನ್ನೇ ನೋಡುತ್ತೇವೆ. ಯೋಸೇಫನಿಗೆ ದೊರೆತ ದಿವ್ಯ ದರ್ಶನಗಳನ್ನು ನೋಡಿದ ಅವನ ಹತ್ತು ಅಣ್ಣಂದಿರೂ ಹೊಟ್ಟೆಕಿಚ್ಚಿನಿಂದ ಎಷ್ಟು ಬದಲಾದರೆಂದರೆ, ಆತನನ್ನು ಕೊಲೆಮಾಡುವ ಮನಸ್ಸು ಅವರಲ್ಲಿ ಉಂಟಾಯಿತು.
ಅರಸನಾದ ಸೌಲನು ಯೌವನಸ್ಥನಾದ ದಾವೀದನ ಬಗ್ಗೆ, "ಸೌಲನು ಸಾವಿರಗಟ್ಟಳೆಯಾಗಿ ಕೊಂದನು; ದಾವೀದನು ಹತ್ತು ಸಾವಿರಗಟ್ಟಳೆಯಾಗಿ ಕೊಂದನು," ಎಂದು ಸ್ತ್ರೀಯರು ಹಾಡಿದಾಗ ಅಸೂಯೆಗೊಂಡನು. ಅಂದಿನಿಂದ ಅವನು ದಾವೀದನ ಮೇಲೆ ಕಣ್ಣಿರಿಸಿ, ಅವನನ್ನು ಕೊಲ್ಲಲು ತೀರ್ಮಾನಿಸಿದನು. ಮಾನವನ ಚರಿತ್ರೆ - ಏಕೆ, ಕ್ರೈಸ್ತ ಸಭೆಯ ಇತಿಹಾಸವೂ ಕೂಡ - ಮತ್ತೆ ಮತ್ತೆ ಇದೇ ಕತೆಯಿಂದ ತುಂಬಿದೆ.
ಹಾಗೆಯೇ, ಫರಿಸಾಯರ ಹಿರಿಯರು, ನಜರೇತಿನ ಯೇಸುವು ಇನ್ನೂ ಚಿಕ್ಕ ವಯಸ್ಸಿನಲ್ಲಿ ಗಳಿಸಿದ್ದ ಜನಪ್ರಿಯತೆಯನ್ನು ನೋಡಿ ಅಸೂಯೆಯಿಂದ, ಹೇಗಾದರೂ ಆತನನ್ನು ಶಿಲುಬೆಗೆ ಹಾಕಿಸಬೇಕೆಂದು ನಿರ್ಣೈಸಿದರು.
ನಾವು ಹೊಸ ಒಡಂಬಡಿಕೆಯಲ್ಲಿ ಬಾರ್ನಬನಲ್ಲಿ, ಇವೆಲ್ಲಕ್ಕೂ ತದ್ವಿರುದ್ಧವಾದ, ಆಹ್ಲಾದಕರವಾದ ಒಂದು ಉದಾಹರಣೆಯನ್ನು ಕಾಣುತ್ತೇವೆ. ಹೊಸದಾಗಿ ಮಾನಸಾಂತರವಾಗಿದ್ದ ಪೌಲನನ್ನು ಯಾರೂ ಅಂಗೀಕರಿಸದಿದ್ದಾಗ, ಅವನನ್ನು ತನ್ನ ರೆಕ್ಕೆಯಡಿಯಲ್ಲಿ ಬಚ್ಚಿಟ್ಟ ಹಿರಿಯ ಕಾರ್ಯಕರ್ತನು ಅವನು. ಬಾರ್ನಬನು ಪೌಲನನ್ನು ಅಂತಿಯೋಕ್ಯದ ಸಭೆಗೆ ಕರೆದುಕೊಂಡು ಬಂದು ಅಲ್ಲಿ ಅವನನ್ನು ಪ್ರೋತ್ಸಾಹಿಸಿದನು.
ಬಾರ್ನಬ ಮತ್ತು ಪೌಲರು ಜೊತೆಯಾಗಿ ಸೇವೆಗಾಗಿ ಪ್ರವಾಸಕ್ಕೆ ಹೋಗುವದನ್ನು ಅ.ಕೃ. 13ರಲ್ಲಿ ನಾವು ಓದುತ್ತೇವೆ. ತನ್ನ ಜೊತೆಯಲ್ಲಿದ್ದ ಕಿರಿಯ ಕಾರ್ಯಕರ್ತನಾದ ಈ ಪೌಲನನ್ನು ದೇವರು ಒಂದು ಹಿರಿದಾದ ಕಾರ್ಯಭಾರಕ್ಕೆ ಕರೆಯುತ್ತಿರುವುದಾಗಿ ಮನಗಂಡ ಬಾರ್ನಬನು, ತಾನು ಸ್ವತಃ ಸದ್ದಿಲ್ಲದೆ ಹಿನ್ನೆಲೆಗೆ ಸರಿದು ಸೂಕ್ತವಾಗಿ ಮರೆಯಾಗಲು ಸಮ್ಮತಿಸಿದನು. ಅಪೊಸ್ತಲರ ಕೃತ್ಯಗಳಲ್ಲಿ ಇಲ್ಲಿಂದ ಮುಂದಕ್ಕೆ, "ಬಾರ್ನಬ ಮತ್ತು ಪೌಲರು" ಎಂದಿದ್ದ ವಾಕ್ಯಾಂಶವು ಯಾರ ಗಮನಕ್ಕೂ ಬಾರದಂತೆಯೇ "ಪೌಲನೂ ಬಾರ್ನಬನೂ" ಎಂದು ಪರಿವರ್ತನೆಗೊಳ್ಳುವದು. ಇಂದು ಕ್ರಿಸ್ತ ಸಭೆಯ ಸಂಕಟಕ್ಕೆ ಕಾರಣ, ಅಲ್ಲಿ ಬಾರ್ನಬನಂತೆ ಪಕ್ಕಕ್ಕೆ ಸರಿದು ಇನ್ನೊಬ್ಬನಿಗೆ ಗೌರವ ಸಲ್ಲುವದಕ್ಕೆ ಸಮ್ಮತಿಸುವವರು ಬಹಳ ವಿರಳವಾಗಿರುವುದರಿಂದಲೇ.
ಪ್ರಾಮುಖ್ಯವಲ್ಲದ ವಿಷಯಗಳಲ್ಲಿ ಪಕ್ಕಕ್ಕೆ ಸರಿಯಲು ನಾವು ತಯಾರಿದ್ದೇವೆ! ಉದಾಹರಣೆಗೆ, ಒಂದು ದ್ವಾರದ ಮೂಲಕ ಒಳಕ್ಕೆ ಹೋಗುವಾಗ, ನಾವು ಮುನ್ನುಗ್ಗದೇ ಮೊದಲು ಇನ್ನೊಬ್ಬರಿಗೆ ಅವಕಾಶ ಕೊಡಲು ನಮಗೆ ಇಷ್ಟವಿದೆ. ಆದರೆ ಪ್ರಮುಖ ಸಂಗತಿಗಳಲ್ಲಿ - ಕ್ರಿಸ್ತಸಭೆಯಲ್ಲಿ ಸ್ಥಾನಮಾನದ, ಇಲ್ಲವೇ ನಾಯಕತ್ವದ ಪ್ರಶ್ನೆ ಬಂದಾಗ - ಹಿನ್ನೆಲೆಗೆ ತೆರಳಲು ನಾವು ಸುಲಭವಾಗಿ ಒಪ್ಪೆವು. ಎಂತಹ ಕಪಟದ ನಿಜ ಪ್ರವೃತ್ತಿ ನಮ್ಮದು. ಚಿಕ್ಕ ಪುಟ್ಟ ವಿಷಯಗಳಲ್ಲಿ ನಮ್ಮಲ್ಲಿ ಕಪಟ ದೀನತೆ ಕಾಣಿಸುವದು. ಆದರೆ ಮುಖ್ಯ ವಿಷಯಗಳು ಎದುರಾದಾಗಲೇ ನಮ್ಮ ಸ್ವಭಾವವು ನಮಗೆ ಗೋಚರಿಸುವದು.
|